ನಿಷಾದರು
	ಪ್ರಾಚೀನ ಭಾರತದಲ್ಲಿದ್ದ ಒಂದು ಆರ್ಯೇತ ಬುಡಕಟ್ಟಿನ ಜನ. ಈ ಜನ ಬ್ರಾಹ್ಮಣ ತಂದೆ ಮತ್ತು ಶೂದ್ರ ತಾಯಿಯನ್ನು ಮೂಲ ಪುರುಷರನ್ನಾಗಿ ಉಳ್ಳವರೆಂದು ಮನು ಹೇಳುತ್ತಾನೆ. ಮಹಾಕಾವ್ಯಗಳಲ್ಲಿ ನಿಷಾದರು ವಿಂಧ್ಯ ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ನಾಗರಿಕತೆಯ ಏಣಿಯ ಅತ್ಯಂತ ಕೆಳಭಾಗದಲ್ಲಿದ್ದ ಈ ಮೂಲನಿವಾಸಿಗಳನ್ನು ಆರ್ಯರು ಮ್ಲೇಚ್ಛರೆಂದು ಕರೆದಿದ್ದಾರೆ. ಭಾಗವತದಲ್ಲಿ ನಿಷಾದರನ್ನು ಕಾಗೆಯಂತೆ ಕಪ್ಪಗೆ, ಬಹಳ ಕುಳ್ಳಗೆ, ಉಬ್ಬಿದ ಕೆನ್ನೆ, ಕೆಂಪಾದ ಕಣ್ಣು, ತಾಮ್ರವರ್ಣದ ಕೂದಲುಳ್ಳವರೆಂದು ವರ್ಣಿಸಲಾಗಿದೆ. ಈ ಜನ ಭಾರತದ ಅತ್ಯಂತ ಪುರಾತನ ಪ್ರದೇಶವಾದ ವಿಂಧ್ಯ ಪರ್ವತ ಹಾಗೂ ಕನ್ಯಾಕುಮಾರಿಗಳ ನಡುವಿನ ದೇಶದಲ್ಲಿ ವಾಸಿಸುತ್ತಿದ್ದರು. ನಳ ಮಹಾರಾಜ ನಿಷಾದರ ದೊರೆ. ಏಕಲವ್ಯ ನಿಷಾದ ನಾಯಕ.

	ಈಗ ಉಳಿದುಬಂದಿರುವ ನಿಷಾದ ವಂಶಸ್ಥರೆಂದರೆ ಬಿಲ್ಲರು, ಕೋಲರು, ಮಧ್ಯ ಏಷ್ಯದ ಕೆಲವು ಆದಿವಾಸಿ ಬುಡಕಟ್ಟುಗಳು ಹಾಗೂ ಪಂಚಮದಲ್ಲಿ ಕೆಲವು ಪಂಗಡಗಳವರು.							(ಎಂ.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ